ಕೇಂದ್ರಾಡಳಿತ ಪ್ರದೇಶ. ದೆಹಲಿಗೆ ಉತ್ತರ-ವಾಯವ್ಯದಲ್ಲಿ 151ಕಿ.ಮೀ. ದೂರದಲ್ಲಿದೆ. ವಿಸ್ತೀರ್ಣ 114 ಚ.ಕಿಮೀ. ಒಟ್ಟು ಜನಸಂಖ್ಯೆ 960787. ನಗರ ಭಾಗದ ಜನಸಂಖ್ಯೆ 1,025682. ಚಂಡೀಗಢ ಭಾರತದ ಅತ್ಯಂತ ಶುಚಿಯಾದ, ಸುಂದರ ನಗರ. ಲಿಂಗದ ಅನುಪಾತ 1000 ಗಂಡಸರಿಗೆ 829 ಹೆಂಗಸರು. ಈ ನಗರ, ವಾಸ್ತುಶಿಲ್ಪ ಪ್ರಪಂಚದ ಒಂದು ವೈಶಿಷ್ಟ್ಯ. ನಾರ್ಮ ಎವೆನ್ಸನ್ ಬರೆದಿರುವಂತೆ ಇದರ ಕಲ್ಪನೆಯೇ ಒಂದು ನವ್ಯ ಕವಿತೆಯಿದ್ದಂತೆ. ಇದು ತಂತ್ರಜ್ಞಾನಕ್ಕೂ ವೇಗ-ಚಲನೆಗಳಿಗೂ ಬೆಳಕು ತುಂಬಿದ ಅನಂತ ದೃಷ್ಟಿಪಥಗಳನ್ನು ತೆರೆಯುವ ಮಾನವಕೃತ ವಿಶಾಲ ಆಯಾಮಗಳ ಜಗತ್ತಿಗೂ ಸಲ್ಲಿಸಿದ ಸಂಕೀರ್ತನೆಯಂತಿದೆ.

ಚಂಡೀಗಢದ ಇತಿಸಹಾದ ಆರಂಭ 1947ರಲ್ಲಿ, ಭಾರತದ ವಿಭಜನೆ ಆದಾಗ. ಪಂಜಾಬ್ ಪ್ರಾಂತ್ಯದ ಪಶ್ಚಿಮ ಭಾಗ ಅದರ ರಾಜಧಾನಿಯಾದ ಲಾಹೋರಿನೊಂದಿಗೆ ಪಾಕಿಸ್ತಾನಕ್ಕೆ ಹೋಯಿತು. ಪುರ್ವಭಾಗ ಭಾರತದ ಪಾಲಿಗೆ ಬಂತು. ಪುರ್ವ ಪಂಜಾಬ್ ಸರ್ಕಾರ ಸ್ವಲ್ಪ ಕಾಲ ಜಲಂಧರ್ನಿಂದ ಆಡಳಿತ ನಡೆಸುತ್ತಿತ್ತು. ಆದರೆ ಕಚೇರಿಗಳನ್ನು ನಡೆಸಲು ಸಾಕಷ್ಟು ಸ್ಥಳಾವಕಾಶವಿಲ್ಲದ್ದರಿಂದ ರಾಜಧಾನಿಯನ್ನು ತಾತ್ಕಾಲಿಕವಾಗಿ ಸಿಮ್ಲಾ ನಗರಕ್ಕೆ ವರ್ಗಾಯಿಸಲಾಯಿತು. ಹೊಸ ಸರ್ಕಾರದ ರಾಜಧಾನಿಯಾಗಲು ಹಲವು ನಗರಗಳು ಮುಂದೆ ಬಂದು ತಂತಮ್ಮಲ್ಲೇ ಸ್ಪರ್ಧಿಸಿದುವು. ಹಳೆಯ ನಗರವೊಂದನ್ನು ಮಾರ್ಪಡಿಸಿಕೊಳ್ಳುವುದಕ್ಕಿಂತ ಹೊಸ ನಗರವೊಂದನ್ನು ನಿರ್ಮಿಸುವುದೇ ಅಗ್ಗವೂ ಸರಳವೂ ಆದುದು ಎಂದು ಭಾವಿಸಲಾಯಿತು. ಅದಕ್ಕಾಗಿ ಸೂಕ್ತ ಸ್ಥಳದ ಅನ್ವೇಷಣೆ ಆರಂಭವಾಯಿತು. ವಾಯು ಸರ್ವೇಕ್ಷಣೆ ನಡೆಸಿದಮೇಲೆ, ವಿವಿಧ ದೃಷ್ಟಿಗಳಿಂದ ಈಗಿನ ನಗರದ ನಿವೇಶನವನ್ನು ಆರಿಸಲಾಯಿತು. ಪಂಜಾಬಿನ ನಗರಗಳಿಗೂ ದೆಹಲಿಗೂ ಈ ಸ್ಥಳದ ಸಾಮೀಪ್ಯ, ರಸ್ತೆ-ರೈಲು ಸಂಪರ್ಕ, ನೆಲದ ಅಡಿಯ ನೀರಿನ ಸೌಲಭ್ಯ, ಆಗ್ನೇಯದ ಕಡೆಗೆ ನೆಲ ಇಳಿಜಾರಾಗಿರುವುದರಿಂದ ಜಲೋತ್ಸಾರಣ ಸೌಕರ್ಯ, ಬೆಟ್ಟ ತೊರೆಗಳಿಗೆ ಹತ್ತಿರವಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ವಸ್ತುಗಳಲ್ಲಿ ಕೆಲವನ್ನು ಸುಲಭವಾಗಿ ದೊರಕಿಸಿಕೊಳ್ಳುವ ಸಾಧ್ಯತೆ, ಹಿಮಾಲಯ ಪರ್ವತಗಳ ಭವ್ಯ ಹಿನ್ನೆಲೆ-ಇವು ಈ ಸ್ಥಳವನ್ನು ಆರಿಸಲು ಕೆಲವು ಮುಖ್ಯ ಕಾರಣಗಳು. ಈ ನಗರದಿಂದ 13 ಮೈ. ದೂರದಲ್ಲಿರುವ ಪುರಾತನ ಚಂಡೀ ಮಂದಿರದಿಂದಾಗಿ ಇದಕ್ಕೆ ಚಂಡೀಗಢವೆಂಬ ಹೆಸರು ನೀಡಲಾಗಿದೆ. 

ನಗರದ ಪ್ರಥಮ ನಕ್ಷೆಯನ್ನು ನ್ಯೂಯರ್ಕಿನಲ್ಲಿ ಆಲ್ಬರ್ಟ್ ಮೇಯರ್ ಎಂಬವರು ಮ್ಯಾತ್ಯೂ ನಾವಿಕಿಯೊಂದಿಗೆ ಸೇರಿ ರಚಿಸಿದರು. 1950ರಲ್ಲಿ ವಿಮಾನಾಪಘಾತವೊಂದರಲ್ಲಿ ನಾವಿಕಿ ತೀರಿಕೊಂಡರು. ಆಗ ಈ ಕೆಲಸವನ್ನು ಜಗದ್ವಿಖ್ಯಾತ ವಾಸ್ತುಶಿಲ್ಪಿ ಲ ಕಾಬೂರ್ಯ್ಸ್ಯೇಗೆ ವಹಿಸಲಾಯಿತು. ಕಾಬೂರ್ಯ್ಸ್ಯೇಯ ಸೋದರ ಸಂಬಂಧಿ ಪ್ಯೇರ್ ಷಾನ್ರೆ, ಇಂಗ್ಲಿಷ್ ವಾಸ್ತುಶಿಲ್ಪಿಗಳಾದ ಇ. ಮ್ಯಾಕ್ಸ್ವೆಲ್ ಫ್ರೈ ಮತ್ತು ಜೇನ್ ಬಿ. ಡ್ಯ್ರೂ ಇವರು ಕಾಬೂರ್ಯ್ಸ್ಯೇಗೆ ಸಹಾಯ ಮಾಡಿದರು. 1951-1965ರಲ್ಲಿ ಚಂಡೀಗಢದಲ್ಲಿ ಬಹುತೇಕ ಸಾರ್ವಜನಿಕ ಹಾಗೂ ಖಾಸಗಿ ಕಟ್ಟಡಗಳು ಇವರ ನೇತೃತ್ವದಲ್ಲಿ ನಿರ್ಮಿತವಾದವು. ನಿಷ್ಠಾವಂತರಾದ ಭಾರತೀಯ ವಾಸ್ತುಶಿಲ್ಪಿಗಳ ಹಾಗೂ ನಗರಯೋಜಕರ ತಂಡವೊಂದು ಈ ಕಾರ್ಯದಲ್ಲಿ ನೆರವು ನೀಡಿತು.

ಹೊರ ಹಿಮಾಲಯ ಪರ್ವತಪ್ರದೇಶದಲ್ಲಿ ಮನೋಹರವಾದ ಸಿವಾಲಿಕ್ ಬೆಟ್ಟದ ತಪ್ಪಲಿನಲ್ಲಿ ನಿರ್ಮಿತವಾಗಿರುವ ಈ ನಗರದ ಪುರ್ವಕ್ಕೆ ಸುಖ್ನಾ ಚೋ ಮತ್ತು ಪಶ್ಚಿಮಕ್ಕೆ ಪಾಟಿಯಾಲಿ ರಾವ್ ನದಿಗಳು ಹರಿಯುತ್ತವೆ. ಇವು ಮಳೆಗಾಲದಲ್ಲಿ ಮಾತ್ರ ಪ್ರವಾಹದಿಂದ ಕೂಡಿರುತ್ತವೆ. ಹೀಗೆ ಈ ನಗರಕ್ಕೆ ಮೂರು ಕಡೆಗಳಲ್ಲಿ ನೈಸರ್ಗಿಕ ಎಲ್ಲೆಕಟ್ಟುಗಳಿವೆ. ದಕ್ಷಿಣದ ಕಡೆಯ ನೆಲ ಇಳಿಜಾರಾಗಿ ತೆರೆದಂತಿರುವುದರಿಂದ ಭವಿಷ್ಯದಲ್ಲಿ ನಗರದ ಬೆಳೆವಣಿಗೆಗೆ ಧಾರಾಳವಾದ ಅವಕಾಶವುಂಟು.

ಚಂಡೀಗಢ ನಗರ ಲ ಕಾಬೂರ್ಯ್ಸ್ಯೇ ಯೋಜನೆಯ ಕಲ್ಪನಾಲೋಕದ ಆವಿಷ್ಕಾರ. ಮಾನವ ನಿರ್ಮಿತ ಕೃತಿಗೆ ಆಂತರಿಕ ನಿಯಮವೊಂದು ಚೇತನ ನೀಡಬೇಕು-ಎಂಬುದು ಅವರ ಅಭಿಪ್ರಾಯ. ಇಡೀ ನಗರ ಒಂದು ಶರೀರ ಎಂಬಂತೆ ಕಲ್ಪಿಸಿಕೊಂಡಿರುವುದು ಸಹಜವೇ. ನಗರಕ್ಕೆ ಶಿರಃಪ್ರಾಯವಾಗಿರತಕ್ಕದ್ದು ಆಡಳಿತ ವಿಭಾಗ. ಸಚಿವಾಲಯ, ಉಚ್ಚ ನ್ಯಾಯಾಲಯ, ವಿಧಾನಭವನ ಮುಂತಾದ ಕಟ್ಟಡಗಳು ಇರುವುದು ಇಲ್ಲಿ. ವಾಣಿಜ್ಯಕೇಂದ್ರವೇ ನಗರದ ಹೃದಯಭಾಗ. ವಿಶ್ವವಿದ್ಯಾಲಯ ಇದರ ಮಿದುಳು, ಜ್ಞಾನಕೇಂದ್ರ. ಸ್ನಾತಕೋತ್ತರ ವೈದ್ಯ ಸಂಶೋಧನ ಶಿಕ್ಷಣ ಸಂಸ್ಥೆ, ಎಂಜಿನಿಯರಿಂಗ್ ಕಾಲೇಜ್, ವಸ್ತುಸಂಗ್ರಹಾಲಯ ಮುಂತಾದ ಹಲವು ಕಟ್ಟಡಗಳು ಇಲ್ಲಿವೆ. ನಗರದ ಕೈಗಾರಿಕಾ ಕ್ಷೇತ್ರ ಕೈ ಇದ್ದಂತೆ. ಹೀಗೆಂದು ಜೇನ್ ಡ್ರ್ಯÆ ಇದನ್ನು ವರ್ಣಿಸಿದ್ದಾರೆ. ನಗರ ಯೋಜನೆಯನ್ನು ಕುರಿತ ಇಂಥ ಶಾರೀರಿಕ ದೃಷ್ಟಿ ಜೀವಂತ, ಅರ್ಥಪುರ್ಣ.

ನಗರವನ್ನು 46 ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗವೂ ಒಂದು ಪ್ರತಿವೇಶ ಘಟಕ. ಒಂದೊಂದು ವಿಭಾಗದಲ್ಲೂ ವಸತಿಗಳ ಜೊತೆಗೆ ಅಂಗಡಿಗಳು, ಪ್ರಾಥಮಿಕ ಶಾಲೆ, ಉದ್ಯಾನಗಳು, ತೋಟಗಳು ಇವೆ. ಇವು ಜನರ ನಿತ್ಯಾಗತ್ಯಗಳನ್ನು ಪುರೈಸುತ್ತವೆ. ಒಳ್ಳೆಯ ನೆರೆಹೊರೆಯನ್ನು ಬೆಳೆಸುವ ಪ್ರಯತ್ನವಿದು. ಸಾಮಾಜಿಕವಾಗಿ ಜನರು ಪರಸ್ಪರ ಹೆಚ್ಚು ಬೆರೆಯುವಂತೆ ಅವಕಾಶ ಕಲ್ಪಿಸುವುದು ಈ ಬಗೆಯ ರಚನೆಯ ಮುಖ್ಯೋದ್ದೇಶ. ಒಳ್ಳೆಯ ನೆರೆಹೊರೆ ಸಂಬಂಧ ನಮ್ಮ ಅನೇಕ ನಗರಗಳಲ್ಲಿ ಇಲ್ಲವೆಂಬುದನ್ನು ಮನಗಂಡು ಈ ನಗರವನ್ನು ಹೀಗೆ ಯೋಜಿಸಲಾಗಿದೆ. ನಗರದ ನಡುವೆ ಉತ್ತರದಿಂದ ದಕ್ಷಿಣದ ಕಡೆಗೆ ನೇರವಾಗಿ ಹೋದರೆ ಸ್ಥೂಲವಾಗಿ ವಿಭಾಗಗಳ ಜನಸಾಂದ್ರತೆ ಅಧಿಕವಾಗುವುದನ್ನೂ ವರಮಾನ ಮಟ್ಟ ಕಡಿಮೆಯಾಗುವುದನ್ನೂ ಕಾಣಬಹುದು.

ಈ ನಗರಯೋಜನೆಯ ಇನ್ನೊಂದು ಗಮನಾರ್ಹ ಅಂಶವೆಂದರೆ ರಸ್ತೆ ವ್ಯವಸ್ಥೆ. ನಗರದ ಆವಶ್ಯಕತೆ ಹಾಗೂ ಸೌಕರ್ಯಗಳಿಗೆ ಅನುಗುಣವಾಗಿ ಇರುವಂತೆ ಇದನ್ನು ಕಲ್ಪಿಸಿಕೊಂಡು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಒಟ್ಟಿನಲ್ಲಿ ಇದರದು ಸರಳು ಚೌಕಟ್ಟಿನ ನಮೂನೆ. ಆದರೆ ಈ ಜಾಲದಲ್ಲಿ ಏಳು ಬಗೆಯ ರಸ್ತೆಗಳಿವೆ (ಈಚೆಗೆ ಎಂಟನೆಯ ಬಗೆಯೊಂದನ್ನು ಅಳವಡಿಸಲಾಗಿದೆ). ಇವನ್ನು ಏಳು ಗಿಗಳೆಂದು ಕರೆಯಲಾಗಿದೆ. ಇವುಗಳ ಮೇಲೆ ಸಂಚರಿಸಬಹುದಾದ ವಾಹನಗಳ ಸ್ವರೂಪ ಹಾಗೂ ವೇಗಗಳ ಆಧಾರದ ಮೇಲೆ ಈ ರಸ್ತೆಗಳಲ್ಲಿ ವ್ಯತ್ಯಾಸ ಕಲ್ಪಿಸಲಾಗಿದೆ. ಮತ್ತೆ ಲ ಕಾಬೂರ್ಯ್ಸ್ಯೇ ಈ ವ್ಯವಸ್ಥೆಯನ್ನು ಜೀವವಿಜ್ಞಾನಕ್ಷೇತ್ರಕ್ಕೆ ಹೋಲಿಸಿ ಈ ರೀತಿ ಹೇಳಿದ್ದಾರೆ: ಜೀವವಿಜ್ಞಾನದಲ್ಲಿ ರಕ್ತಪರಿಚಲನೆ, ದುಗ್ಧರಸವ್ಯವಸ್ಥೆ ಮತ್ತು ಉಸಿರಾಟ ವ್ಯವಸ್ಥೆಗಳಂತೆ 7 vಗಳು ಕಾರ್ಯ ನಿರ್ವಹಿಸುತ್ತವೆ. ಇತರ ರಸ್ತೆಗಳಂತೆ ಇವಂತೂ ಮುಂದೆ ಮೃತ್ಯುವಿನ ದುಷ್ಟ ಸಾಧನಗಳಾಗವು. ಇವು ಆಧುನಿಕ ಸಂಚಾರ ವ್ಯವಸ್ಥೆಯನ್ನು ನಿಯಂತ್ರಣಕ್ಕೊಳಪಡಿಸಬಲ್ಲ ಸಂಘಟಿತ ಅನುಕ್ರಮ ಶ್ರೇಣಿಯಾಗುತ್ತವೆ.
ವಿಶಾಲವಾದ ಉದ್ಯಾನಗಳೂ ವನಗಳೂ ಕ್ರೀಡಾಮೈದಾನಗಳೂ ನಗರ ಶರೀರದ ಶ್ವಾಸಕೋಶಗಳಂತಿವೆ. ಉದ್ಯಾನ ಪ್ರದೇಶಗಳಲ್ಲಿ ಅತ್ಯಂತ ಮುಖ್ಯವಾದ್ದು ವಿರಾಮ ಕಣಿವೆ. ನಗರದ ಮಧ್ಯೆ, ಉತ್ತರದಿಂದ ದಕ್ಷಿಣಕ್ಕೆ ಉದ್ದಕ್ಕೂ ಇದು ಹಬ್ಬಿದೆ. ಗುಲಾಬಿವನ ಇದರ ನಡುವೆ ಇದೆ. ಸುಖ್ನಾ ಹೊಳೆಗೆ ಕಟ್ಟೆ ಕಟ್ಟಿ ರಚಿಸಲಾಗಿರುವ ಸುಖ್ನಾ ಸರೋವರ ಇನ್ನೊಂದು ಮನರಂಜನೆಯ ಸ್ಥಳ.

ನಗರದ ಕಾರ್ಯಭಾರ ಆಡಳಿತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರಮುಖ ಶಿಕ್ಷಣಕೇಂದ್ರ ಕೂಡ. ಕೈಗಾರಿಕೆಗಳೂ ಇಲ್ಲಿ ಬೆಳೆದಿವೆ. ವಿದ್ಯುತ್ ಮಾಪಕ, ಹೆಣಿಕೆ ಸೂಜಿ, ಉಣ್ಣೆಯ ಮೇಲುಡುಗೆ, ತಾಂಡವಾಳದ ಕೊಳವೆ, ವಿದ್ಯುತ್ ಸರಕು, ವರ್ಣವಸ್ತು, ರಸಾಯನ ವಸ್ತು ಮುಂತಾದವು ತಯಾರಾಗುತ್ತವೆ. ಇಲ್ಲಿಯವು ಧೂಮರಹಿತ ಕೈಗಾರಿಕೆಗಳು, ಇವಲ್ಲದೆ ನಗರದ ಹೊರ ವಲಯದಲ್ಲಿ ಹರಿಯಾಣದ ಪಂಚಕುಲ ಮತ್ತು ಪಂಜಾಬಿನ ಮೊಹಾಲಿ ಕೈಗಾರಿಕಾ ಸ್ಥಾನಗಳಿವೆ. ಪಂಜಾಬ್, ಹರಿಯಾಣಾ ಮತ್ತು ಹಿಮಾಚಲ ಪ್ರದೇಶಗಳ ಪ್ರಮುಖ ಪಟ್ಟಣಗಳೊಂದಿಗೆ ಚಂಡೀಗಢಕ್ಕೆ ರಸ್ತೆ ಸಂಪರ್ಕವುಂಟು. ಅಂಬಾಲಾ, ದೆಹಲಿ, ಕಾಲ್ಕಾ ಮತ್ತು ಸಿಮ್ಲಾಗಳಿಗೆ ರೈಲು ಮಾರ್ಗಗಳಿವೆ.	(ಜಿ.ಎಸ್.ಜಿ.ಒ.)

ಪಂಜಾಬಿನ ರಾಜಧಾನಿಯಾಗಿ ನಿರ್ಮಿತವಾದ ಈ ನಗರ, ಪಂಜಾಬ್ ಮತ್ತು ಹರಿಯಾಣಾ ರಾಜ್ಯಗಳ ರಚನೆಯಿಂದಾಗಿ 1966ರ ನವೆಂಬರ್ 1 ರಂದು ಒಕ್ಕೂಟ ಪ್ರದೇಶವಾಯಿತು(ಯೂನಿಯನ್ ಟೆಂಟರಿ). ಚಂಡೀಗಢ ತಮಗೆ ಸೇರಬೇಕೆಂದು ಪಂಜಾಬ್ ಹರಿಯಾಣಾಗಳೆರಡೂ ಕೇಳಿಕೆ ಮಂಡಿಸಿದವು. ಐದು ವರ್ಷಗಳೊಳಗೆ ಚಂಡೀಗಢವನ್ನು ಪಂಜಾಬಿಗೆ ವರ್ಗಾಯಿಸಲಾಗುವುದೆಂದೂ ಹರಿಯಾಣಕ್ಕಾಗಿ ಪ್ರತ್ಯೇಕ ರಾಜಧಾನಿ ನಿರ್ಮಾಣವಾಗುವವರೆಗೆ ಚಂಡೀಗಢ ಒಕ್ಕೂಟ ಪ್ರದೇಶವಾಗಿರತಕ್ಕದೆಂದೂ ಹರಿಯಾಣದ ರಾಜಧಾನಿಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣದ ನೆರವು ನೀಡುವುದೆಂದೂ 1970 ರಲ್ಲಿ ಭಾರತ ಸರ್ಕಾರ ಪ್ರಕಟಿಸಿತು. ಲೋಕಸಭೆಯಲ್ಲಿ ಇದಕ್ಕೆ ಒಂದು ಸ್ಥಾನವಿದೆ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ